ಕೆಳದಿ ಚೆನ್ನಮ್ಮ
ಕೆಳದಿ ಚೆನ್ನಮ್ಮ 1677 ಮತ್ತು 1696 ರ ನಡುವೆ ಕೆಳದಿ ಸಂಸ್ಥಾನವನ್ನು ಆಳಿದ ವೀರ ಮಹಿಳೆ ಕರ್ನಾಟಕದಲ್ಲಿ ಕೆಳದಿ ವೀರಶೈವ ಸಾಮ್ರಾಜ್ಯದ ರಾಣಿಯಾಗಿದ್ದರು. ಕೆಳದಿಯು ಪ್ರಖ್ಯಾತ ಕೆಳದಿ ನಾಯಕರ ಮೊದಲ ರಾಜಧಾನಿಯಾಗಿತ್ತು.
ಚೆನ್ನಮ್ಮನು ಕೋಟಿಪುರದ ಸಿದ್ದಪ್ಪಶೆಟ್ಟರ ಮಗಳು ಹಾಗು ಒಂದನೆಯ ಸೋಮಶೇಖರನಾಯಕ್ ನ (1664-1679) ಮಡದಿ. ಲಿಂಗಣ್ಣಕವಿಯ ಕೆಳದಿನೃಪವಿಜಯ ಎಂಬ ಗ್ರಂಥ ಹಾಗೂ ಇತರ ಆಧಾರಗಳಿಂದ ಚೆನ್ನಮ್ಮನ ಆಳ್ವಿಕೆಯ ಮುಖ್ಯ ಘಟನೆಗಳು ತಿಳಿದು ಬರುತ್ತವೆ.
ಕೆಳದಿ (ಸಾಗರ ತಾಲ್ಲೂಕ)ಯ ರಾಜ ಸೋಮಶೇಖರನಾಯಕ ಪ್ರಾರಂಭದಲ್ಲಿ ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಿದ್ದರೂ ದುರ್ಜನರ ಸಹವಾಸದಿಂದ ದುಶ್ಚಟಗಳಿಗೆ ಬಲಿಯಾಗಿ ಮತಿವಿಕಲನಾಗಿ ಕೊನೆಗೆ 1671ರಲ್ಲಿ ಕೊಲೆಯಾದ. ಅವನಿಗೆ ಮಕ್ಕಳಿರಲಿಲ್ಲ. ಕೆಳದಿ ಸಂಸ್ಥಾನದಲ್ಲಿ ಅರಾಜಕತೆಯುಂಟಾಯಿತು. ನಾಯಕ ಮನೆತನದ ವಿರೋಧಿಗಳು ತಮಗೆ ಬೇಕಾದವನೊಬ್ಬನನ್ನು ನಾಯಕಪಟ್ಟಕ್ಕೆ ತರಲು ಹವಣಿಸಿದರು. ಅಂಥ ದುರ್ಭರ ಸನ್ನಿವೇಶದಲ್ಲಿ ಚೆನ್ನಮ್ಮ ಆಡಳಿತವನ್ನು ವಹಿಸಿಕೊಂಡು ಅಸಾಧಾರಣ ಜಾಣ್ಮೆಯಿಂದ ಸಂಸ್ಥಾನದಲ್ಲಿ ಶಾಂತಿ ಸ್ಥಾಪಿಸಿದಳು.
ಕೆಳದಿಯಲ್ಲುಂಟಾಗಿದ್ದ ದುಃಸ್ಥಿತಿಯನ್ನು ಉಪಯೋಗಿಸಿಕೊಂಡು ಬಿಜಾಪುರದ ಸುಲ್ತಾನ ಮತ್ತು ಇತರ ಪಾಳೆಯಗಾರರು ಕೆಳದಿಯನ್ನು ಕಬಳಿಸಲು ಹೊಂಚು ಹಾಕಿದ್ದರು. ವೈರಿಗಳ ಸಂಚಿನಿಂದಾಗಿ ಚೆನ್ನಮ್ಮ ಒಮ್ಮೆ ರಾಜಧಾನಿಯಿಂದ ತಲೆತಪ್ಪಿಸಿಕೊಳ್ಳಬೇಕಾಯಿತು. ಅವಳು ತನ್ನ ನೆಚ್ಚಿನ ಸಚಿವನಾದ ಗುರು ಬಸಪ್ಪದೇವ ಮತ್ತು ದಂಡನಾಯಕರಾದ ಕೃಷ್ಣಪ್ಪಯ್ಯ ಹಾಗೂ ತಿಮ್ಮರಸಯ್ಯ ಇವರ ಸಹಾಯದಿಂದ ವೈರಿಗಳನ್ನು ಸದೆಬಡಿದು ಸಂಸ್ಥಾನವನ್ನು ವಿಪತ್ತಿನಿಂದ ರಕ್ಷಿಸಿದಳು. ಕೆಳದಿಯ ಚನ್ನಮ್ಮ ರಾಣಿ ಚೆನ್ನಮ್ಮ ಛತ್ರಪತಿ ಶಿವಾಜಿಯ ಎರಡನೆಯ ಮಗನಾದ ರಾಜರಾಮನಿಗೆ ಆಶ್ರಯ ನೀಡಿದ ಪರಿಣಾಮವಾಗಿ ಯುದ್ಧಕ್ಕೆ ಬಂದ ಔರಂಗಜೇಬನ ಸೈನ್ಯವನ್ನು ಸೋಲಿಸಿದ್ದು ಅವಳ ಆಳ್ವಿಕೆಯ ಅತ್ಯಂತ ಮಹತ್ತ್ವದ ಸಂಗತಿಗಳು. ತನ್ನ ಸ್ಥಿರ ಸಂಕಲ್ಪ, ದೂರದೃಷ್ಟಿ ಹಾಗೂ ಕಲಿತನಗಳಿಂದ ಇಕ್ಕೇರಿ ಸಂಸ್ಥಾನವನ್ನು ವಿಪತ್ತಿನಿಂದ ಪಾರು ಮಾಡಿದಳೆಂದು ಚೆನ್ನಮ್ಮ ಪ್ರಸಿದ್ಧಳಾಗಿದ್ದಾಳೆ. ಮೈಸೂರು ಮತ್ತು ಕೆಳದಿಯ ಮಧ್ಯೆ ರಾಜ್ಯ ವಿಸ್ತರಣೆಗಾಗಿ ನಡೆಯುತ್ತಿದ್ದ ಯುದ್ಧಗಳು ರಾಣಿ ಚೆನ್ನಮ್ಮಾಜಿಯ ಕಾಲದಲ್ಲೂ ಮುಂದುವರಿದುವು. ಚೆನ್ನಮ್ಮ ಮೈಸೂರಿನ ಒಡೆಯರ ರಾಜ್ಯವಿಸ್ತರಣ ಕಾರ್ಯವನ್ನು ಎದುರಿಸಿದಳು.
ಕೆಳದಿ ನಾಯಕರು ಮಾಳವ ಗೌಡರು/ಮಲೆನಾಡು ಒಕ್ಕಲಿಗರ ಜಾತಿಗೆ ಸೇರಿದವರು ಮತ್ತು ವೀರಶೈವ ನಂಬಿಕೆಯನ್ನು ಅನುಸರಿಸುತಿದ್ದರು. ಚೆನ್ನಮ್ಮನಿಗೆ ಸಂತತಿ ಇರಲಿಲ್ಲವಾದ್ದರಿಂದ ಬಸಪ್ಪ ಎಂಬ ಕುಮಾರನನ್ನು ದತ್ತುವಾಗಿ ಸ್ವೀಕರಿಸಿದಳು. ಅವನಿಗೆ ಯುದ್ಧ ಮತ್ತು ಆಡಳಿತದಲ್ಲಿ ಶಿಕ್ಷಣ ಕೊಟ್ಟು 1696ರಲ್ಲಿ ಕೆಳದಿ ಬಸವಭೂಪಾಲನೆಂದು ಹೆಸರಿಟ್ಟು ಆಡಳಿತ ವಹಿಸಿಕೊಟ್ಟಳು. ಎರಡು ವರ್ಷಗಳ ಅನಂತರ 1698ರಲ್ಲಿ ಈಕೆ ಮರಣಹೊಂದಿದಳೆಂದು ತಿಳಿದುಬರುತ್ತದೆ.
ಕೆಳದಿ ಚೆನ್ನಮ್ಮನು ಜಂಗಮರಿಗೆ ಮಠ ಮತ್ತು ದೇವಾಲಯಗಳನ್ನು ಕಟ್ಟಿಸಿಕೊಟ್ಟಳು. ತನ್ನ ಪತಿಯ ಹೆಸರಿನಲ್ಲಿ ಅನೇಕ ಅಗ್ರಹಾರಗಳನ್ನು ನಿರ್ಮಿಸಿದಳು. ಒಂದು ಅಗ್ರಹಾರವನ್ನು ತನ್ನ ಸ್ವಂತ ಹೆಸರಿನಿಂದ ಚೆನ್ನಮ್ಮಾಂಬಪುರ ಎಂಬುದಾಗಿ ಕರೆದಳು. ಕೆಳದಿಯ ವೀರಭದ್ರ ದೇವಾಲಯದ ಮುಂದಿನ ಧ್ವಜಸ್ತಂಭವನ್ನು ಸ್ಥಾಪಿಸಿದಳು. ಮೂಕಾಂಬ ದೇವಾಲಯಕ್ಕೆ ಈಕೆ ವಿಶೇಷ ದಾನ ನೀಡಿದಳು. ಅವುಗಳಲ್ಲಿ ದತ್ತಪೀಠದಲ್ಲಿರುವ ಚಂದ್ರದ್ರೋಣ ಪರ್ವತದ ದೇವಾಲಯವೂ ಒಂದಾಗಿದೆ.