ಶ್ರೀ ಹುಚ್ಚರಾಯ ಸ್ವಾಮಿ

ಶಿಕಾರಿಪುರದಲ್ಲಿ ಆಕರ್ಷಣೀಯ ಸ್ಥಳಗಳ ಪೈಕಿ ಹೆಚ್ಚು ಜನರು ಭೇಟಿ ನೀಡುವ ಸ್ಥಳವೆಂದರೆ ಹುಚ್ಚರಾಯ ದೇವಸ್ಥಾನ. ಹೊನ್ನಲಿ ರಸ್ತೆಯ ಶಿಕಾರಿಪುರ ನಗರದ ಹೊರವಲಯದಲ್ಲಿರುವ ಈ ದೇವಾಲಯವನ್ನು ಭ್ರಾಂತೇಷ ದೇವಸ್ಥಾನ ಎಂದೂ ಕರೆಯಲಾಗುತ್ತದೆ. ಇದು ಶಿವಮೊಗ್ಗದಿಂದ 52 ಕಿ.ಮೀ ದೂರದಲ್ಲಿದೆ. ಶ್ರೀ ರಾಮಧೂತ, ವಾನರಯೋಧ, ವಾಯುಪುತ್ರ, ಹನುಮಂತ, ಆಂಜನೇಯ ಎಂದೆಲ್ಲಾ ಕರೆಸಿಕೊಳ್ಳುವ ದೇವರು ಇಲ್ಲಿ ಭ್ರಾಂತೇಶ, ಹುಚ್ಚರಾಯಸ್ವಾಮಿ ಎಂದು ಕರೆಸಿಕೊಂಡಿದ್ದಾನೆ. ಈ ದೇವಾಲಯ ಹುಚ್ಚರಾಯಕೆರೆ ದಂಡೆ ಮೇಲೆ ಹಾಗೂ ಶಿಕಾರಿಪುರ ಪಟ್ಟಣದ ಗಡಿಭಾಗದಲ್ಲಿರುತ್ತದೆ.

ಶ್ರೀ ಹುಚ್ಚರಾಯಸ್ವಾಮಿ ದೇವಾಲಯ ಸರಿ ಸುಮಾರು 17ನೇ ಶತಮಾನದ್ದು ಎಂದು ಊಹಿಸಲಾಗುವುದು 1941ರ ಮೈಸೂರು ಪುರಾತ್ವ ಇಲಾಖೆ ವರದಿಯಂತೆ ಈ ದೇವಾಲಯವನ್ನು ನಿರ್ಮಿಸಿದವರು ವೀರಶೈವರಾದ ಹುಚ್ಚಪ್ಪಸ್ವಾಮಿ ಎನ್ನಲಾಗಿದೆ. ತೀರ್ಥಹಳ್ಳಿ ತಾಲ್ಲೂಕಿನ ಕವಳೆದುರ್ಗ ಮಠದಿಂದ ಬಂದು ತಾಲ್ಲೂಕಿನ ನೆಲವಾಗಿಲು ಗ್ರಾಮದಲ್ಲಿ ನೆಲೆಸಿದ್ದ ವೀರಶೈವ ಸಮುದಾಯಕ್ಕೆ ಸೇರಿದ್ದ ಹುಚ್ಚಪ್ಪಸ್ವಾಮಿ ಎಂಬ ವ್ಯಕ್ತಿ ಶಿಕಾರಿಪುರದ ಬ್ರಾಹ್ಮಣ ಕುಟುಂಬಗಳೊಂದಿಗೆ ಉತ್ತಮ ಸ್ನೇಹ ಬೆಳೆಸಿಕೊಂಡು ಕೊನೆಗೆ ಬ್ರಾಹ್ಮಣ ಧೀಕ್ಷೆಯನ್ನು ಪಡೆಯುತ್ತಾರೆ ಮತ್ತು ಇಲ್ಲಿಯೇ ಮಠವೊಂದನ್ನು ನಿರ್ಮಿಸಿಕೊಂಡಿರುತ್ತಾರೆ. ಒಮ್ಮೆ ಹನುಮಂತ ದೇವರು ಹುಚ್ಚಪ್ಪಸ್ವಾಮಿ ಅವರ ಸ್ವಪ್ನದಲ್ಲಿ ಬಂದು ಊರಿನ ಸಮೀಪದ ದೊಡ್ಡ ಕೆರೆಯಲ್ಲಿ ತನ್ನ ವಿಗ್ರಹವಿದ್ದು ಅದನ್ನು ಹೊರತೆಗೆದು ಪ್ರತಿಷ್ಟಾಪಿಸುವಂತೆ ಅಪ್ಪಣೆಯಾಗುತ್ತದೆ. ಮರುದಿನ ಊರಿನ ಪ್ರಮುಖರಿಗೆ ವಿಷಯ ತಿಳಿಸಿದಾಗ ಕೆಲವರು ಅಪಹಾಸ್ಯ ಮಾಡುತ್ತಾರೆ. ಕೆಲವರು ಉಪೇಕ್ಷೇ ಮಾಡದೆ ಹುಚ್ಚಪ್ಪಸ್ವಾಮಿ ತೋರಿಸಿದ ಕಡೆ ಪರಿಶೀಲಿಸಲಾಗಿ ಚೌಕಾಕಾರದಲ್ಲಿದ್ದ ಕಲ್ಲಿನ ಬಾನಿಯೊಂದು ಮಗುಚಿಕೊಂಡಿರುವಂತೆ ಗೋಚರಿಸುತ್ತದೆ. ಅತ್ಯಂತ ಕತೂಹಲದಿಂದ ಅಂಗಾತ ಮಾಡಿದಾಗ ಅದರಲ್ಲಿ ಸುಂದರ ಹನುಂತ ದೇವರ ವಿಗ್ರಹ ಇರುವುದು ಪತ್ತೆಯಾಗುತ್ತದೆ. ಸುಮಾರು ನಾಲ್ಕು ಅಡಿ ಆಳ ಆರು ಅಡಿಗಳಷ್ಟು ಉದ್ದದ ಈ ಬಾನಿಯಲ್ಲಿದ್ದ ಪ್ರಸನ್ನ ಆಂಜನೇಯಸ್ವಾಮಿಯ ವಿಗ್ರಹವನ್ನು ಹೊರತೆಗೆಯಲಾಗುತ್ತದೆ. ಈ ಕಲ್ಲಿನ ಬಾನಿ ಈಗಲೂ ದೇವಾಲಯದ ಆವರಣದಲ್ಲಿದೆ. ಎಲ್ಲಿ ಪ್ರತಿಷ್ಟಾಪಿಸಬೇಕು ಎಂಬ ವಿಷಯ ಬಂದಾಗ ಹುಚ್ಚಪ್ಪಸ್ವಾಮಿ ಅವರ ಮಠವೇ ಸೂಕ್ತವೆಂದಾಗುತ್ತದೆ. ಈ ದೇವರಿಗೆ ತನ್ನ ಹೆಸರಿಡುವುದಾದರೆ ಮಠದಲ್ಲಿ ಜಾಗಕೊಡುವುದಾಗಿ ಹುಚ್ಚಪ್ಪಸ್ವಾಮಿ ಹೇಳುತ್ತಾರೆ. ಈ ಷರತ್ತಿನ ಮೇಲೆ ಮಠದಲ್ಲೆ ದೇವರ ಪ್ರತಿಷ್ಟಾಪಿಸಲಾಗುತ್ತದೆ. ಅಂದಿನಿಂದ ಈ ದೇವರಿಗೆ ಹುಚ್ಚರಾಯಸ್ವಾಮಿ ಎಂಬ ಹೆಸರಿನಿಂದ ಕರೆಯಲಾಗುತ್ತದೆ.

ವಿಜಯನಗರ ಅರಸ ಶ್ರೀಕೃಷ್ಣದೇವಾರಾಯನ ಅಸ್ಥಾನದ ಗುರುಗಳಾಗಿದ್ದ ಶ್ರೀ ವ್ಯಾಸರಾಯಸ್ವಾಮಿಗಳು ಮುಕ್ತಿ ಮಾರ್ಗದ ಬೋಧನೆ ಹಾಗೂ ಧರ್ಮಜಾಗೃತಿ ಮಾಡುತ್ತ ಕನ್ನಡ ನಾಡಿನಲ್ಲಿ ಸಂಚರಿಸುತ್ತಿದ್ದಾಗ ಮಲೆನಾಡ ಪ್ರಕೃತಿಯ ಮಡಿಲಾದ ಶಿಕಾರಿಪುರಕ್ಕೆ ಆಗಮಿಸುವರು. ಇಲ್ಲಿನ ಹನುಮಂತ ದೇವರ ವಿಗ್ರಹ ಭಿನ್ನವಾಗಿರುವುದನ್ನು ಗಮನಿಸುತ್ತಾರೆ. ಹಂಪೆಯಲ್ಲಿ ಯಂತ್ರೋದ್ದಾರ ಹನುಮಂತ ದೇವರನ್ನು ಪ್ರತಿಷ್ಟಾಪಿಸಿ ಒಲಿಸಿಕೊಂಡಿದ್ದ ಸ್ವಾಮಿಗಳು ಶಿಕಾರಿಪುರದಲ್ಲಿ ಆಂಜನೇಯಸ್ವಾಮಿಯನ್ನು ಪ್ರತಿಷ್ಟಾಪಿಸುವ ಕೈಂಕಾರ್ಯಕ್ಕೆ ಮುಂದಾಗುತ್ತಾರೆ. ಆಗ ಸಮೀಪದ ಬಳ್ಳಿಗಾವಿಯಿಂದ ಮೂಲ ವಿಗ್ರಹದ ಯಥಾವತ್ ಆಂಜನೇಯಸ್ವಾಮಿಯ ವಿಗ್ರಹವನ್ನು ಕೆತ್ತಿಸಲಾಗುತ್ತದೆ. ಅದನ್ನು ತರುವ ಕಾರ್ಯದಲ್ಲಿ ದೇವರ ನಾಸಿಕ ಭಾಗ ಭಗ್ನವಾಗುತ್ತದೆ. ಭಗ್ನವಾದ ವಿಗ್ರಹ ಪೂಜೆಗೆ ಶ್ರೇಷ್ಟವಲ್ಲವಾದ್ದರಿಂದ ಜನತೆ ಮತ್ತೆಜಿಜ್ಞಾಸೆಗೊಳಗಾಗುತ್ತಾರೆ. ಆಗ ವ್ಯಸರಾಯರ ಸಲಹೆಯಂತೆ ಉತ್ತರ ಭಾರತದ ಹಿಮಾಚಲದಿಂದ ಸಾಲಿಗ್ರಾಮವನ್ನು ತಂದು ನಾಸಿಕ ಭಾಗದಲ್ಲಿ ಜೋಡಿಸಿ ಪ್ರತಿಷ್ಟಾಪಿಸಲಾಗಿರುತ್ತದೆ. ಈ ವೆತ್ಯಾಸವನ್ನು ವಿಗ್ರಹದಲ್ಲಿ ಈಗಲೂ ಕಾಣಬಹುದಾಗಿದೆ.

ಚಿತ್ರದುರ್ಗ ಹಾಗೂ ಮಂಗಳೂರು ರೆಸಿಡೆಂಟರು ಬೇಟೆ ನಾಯಿಯಂತೆ ಬೆನ್ನುಹತ್ತಿದಾಗ ಶಿಕಾರಿಪುರಕ್ಕೆ ಬಂದ ಧೋಂಡೀಯ ವಾಘ ಶ್ರೀ ಹುಚ್ಚರಾಯಸ್ವಾಮಿಗೆ ಹರಕೆ ಕಟ್ಟಿಕೊಳ್ಳುತ್ತಾನೆ. ತಾನು ಬ್ರಿಟೀಷ್ ಖೈದಿಯಾಗದೆ ಬಿದನೂರು ಅರಸರ ಬಳಿ ಹೋಗುವಂತಾದರೆ ತನ್ನ ಖಡ್ಗವನ್ನು ಸಮರ್ಪಿಸುವುದಾಗಿ ಬೇಡಿಕೊಳ್ಳುತ್ತಾನೆ. ಆಗ ಅಪರೂಪದ ವರ್ಷಧಾರೆ ಸುರಿದು ಶಿಕಾರಿಪುರದ ಜೀವನದಿ ಕುಮದ್ವಿತಿ ತುಂಬಿ ಹರಿಯುತ್ತಾಳೆ. ಬ್ರಿಟೀಷ್ ಸೈನಿಕರು ನದಿ ದಾಟಿ ಬರಲಾರದೆ ಹಿಂತಿರುಗುತ್ತಾರೆ ನಂತರ ಧೋಂಡಿಯಾವಾಘ ತಾನು ಹೇಳಿದಂತೆ ಯುದ್ದ ಖಡ್ಗವನ್ನು ದೇವರಿಗೆ ಸಮರ್ಪಿಸುತ್ತಾನೆ. ಇದು ಈಗಲೂ ದೇವಾಲಯದಲ್ಲಿದೆ. ಅಲ್ಲದೆ ಹುಚ್ಚಪ್ಪಸ್ವಾಮಿ ಪ್ರತಿಷ್ಟಾಪಿಸಿ ಭಗ್ನವಾಗಿದ್ದ ಮೂಲದೇವರ ವಿಗ್ರಹ ಕೂಡ ದೇವಾಲಯದ ಪೌಳಿಯ ಗೋಡೆಯಲ್ಲಿ ಪ್ರದರ್ಶನಕ್ಕಿಡಲಾಗಿದೆ.

ಶ್ರೀ ಹುಚ್ಚರಾಯಸ್ವಾಮಿ ದೇವಸ್ಥಾನಕ್ಕೆ ಬರುವ ಭಕ್ತರು ಸಂತಾನ ಪ್ರಾಪ್ತಿಗಾಗಿ ಪ್ರಾರ್ಥಿಸಿ ಎದುರುಗಡೆ ಸಂತಾನ ಚೌಡಮ್ಮ ದೇವಾಲಯಕ್ಕೆ ಹರಕೆ ಮಾಡಿಕೊಂಡರೆ ಸಂತಾನ ಪ್ರಾಪ್ತಿಯ ಫಲ ಸಿಗುತ್ತದೆ. ಶ್ರೀ ಹುಚ್ಚರಾಯ ಸ್ವಾಮಿಯನ್ನು ಶ್ರೀ ಭ್ರಾಂತೇಶನೆಂಬ ನಾಮಾಂಕಿತದಿಂದ ಕರೆಯುವುದರಿಂದ ಭ್ರಾಂತಿಯನ್ನ ಅರ್ಥಾತ್ ಭ್ರಮೆಯನ್ನ ದೂರ ಮಾಡುವನು ಆಗಿದ್ದು, ಇದರಿಂದ ರಾಹು ದೋಷ ಪರಿಹಾರಕ್ಕೆ ಸೂಕ್ತವಾದ ದೇವಸ್ಥಾನವಾಗಿದೆ. ದುಷ್ಟ ಸ್ವಪ್ನ, ಶತ್ರು ಬಾದೆ, ದೃಷ್ಟಿದೋಷ, ಬಾಲಗ್ರಹ ಈ ದೋಷ ಪರಿಹಾರಕ್ಕೆ ಯಂತ್ರ, ಅಂತರ್ ಕಾಯಿ, ಕಪ್ಪುದಾರ, ಕುಂಕುಮ, ದೇವರ ಬೆವರು ಇತ್ಯಾದಿ ಪರಿಹಾರಗಳಿಂದ ಭಕ್ತರಿಗೆ ಅನುಗ್ರಹಿತವಾಗಿದೆ.

ಶ್ರೀ ಹುಚ್ಚರಾಯಸ್ವಾಮಿಯನ್ನು ರುದ್ರಾಂಶ ಸಂಭೂತ ಎಂದು ಶಾಸ್ತ್ರಹೇಳುವುದರಿಂದ ರುದ್ರಾಭಿಷೇಕ ಬಹಳ ವಿಶೇಷವಾಗಿದೆ ದೇವಸ್ಥಾನದ ಪ್ರಕಾರದಲ್ಲಿ ರುದ್ರಾಂಶವಾಗಿರುವ ಭೂತಪ್ಪನ ಸಾನಿದ್ಯವಿದೆ. ಶ್ರೀ ಆಂಜನೇಯ ಮತ್ತು ಭೂತಪ್ಪನಿಗೆ ಬಾಳೆಹಣ್ಣಿನ ಸೇವೆ ನೈವಿದ್ಯ ವಿಶೇಷವಿರುತ್ತದೆ.

ಶಿವಮೊಗ್ಗವು ಜಲಪಾತಗಳು, ಕಾಡುಗಳು ಮತ್ತು ಬೆಟ್ಟಗಳು ಸೇರಿದಂತೆ ಸುಂದರವಾದ ನೈಸರ್ಗಿಕ ತಾಣಗಳಿಂದ ಆವೃತವಾಗಿದೆ, ಇದು ಪ್ರಕೃತಿ ಪ್ರಿಯರಿಗೆ ಮತ್ತು ಚಾರಣಿಗರಿಗೆ ನೆಚ್ಚಿನ ತಾಣವಾಗಿದೆ. ಈ ಪ್ರದೇಶದ ಪ್ರಶಾಂತ ವಾತಾವರಣ ಮತ್ತು ಆಹ್ಲಾದಕರ ವಾತಾವರಣವು ದೇಶದ ವಿವಿಧ ಭಾಗಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಭಾಷೆ ಬದಲಾಯಿಸಿ