ಸಾವೆಹಕ್ಲು ಅಣೆಕಟ್ಟು

ಸಾವೆಹಕ್ಲು ಜಲಾಶಯವು ಶಿವಮೊಗ್ಗದ ಅತ್ಯಂತ ಪ್ರಸಿದ್ಧ ನೀರಿನ ಜಲಾಶಯಗಳಲ್ಲಿ ಒಂದು. ಸಾವೆಹಕ್ಲು ಜಲಾಶಯವು ಸುಂದರವಾದ ತಾಣವಾಗಿದೆ. ಈ ಜಲಾಶಯವು ಶಿವಮೊಗ್ಗದಿಂದ 94.7 ಕಿ.ಮೀ ಮತ್ತು ಹೊಸನಗರದಿಂದ 29 ಕಿ.ಮೀ ದೂರದಲ್ಲಿ ಇದೆ.

ಪ್ರಸಿದ್ಧ ಚಕ್ರ ಅಣೆಕಟ್ಟಿನ ಸಮೀಪವಿರುವ ಚಕ್ರಾ ನದಿಯ ಮೇಲೆ ನಿರ್ಮಿಸಲಾದ ಸಾವೆಹಕ್ಲು ಜಲಾಶಯವನ್ನು 1980 ರಲ್ಲಿ ನಿರ್ಮಿಸಲಾಯಿತು. 53 ಮೀಟರ್ ಎತ್ತರದ ಈ ಮಣ್ಣಿನ ಅಣೆಕಟ್ಟನ್ನು ಮಣ್ಣು ತುಂಬಿ ಕಲ್ಲಿನ ಪದರದಿಂದ ನಿರ್ಮಿಸಲಾಗಿದೆ.

ಅಂದಿನ ಮೈಸೂರು ರಾಜ್ಯದ ವಿದ್ಯುತ್ ಬೇಡಿಕೆಯನ್ನು ಪೂರೈಸಲು ನಿರ್ಮಾಣ ಮಾಡಿದ ಲಿಂಗನಮಕ್ಕಿ ಅಣೆಕಟ್ಟು ಎಲ್ಲರಿಗೂ ಗೊತ್ತಿರುವ ಸಂಗತಿ ಆದರೆ ಈ ಆಣೆಕಟ್ಟು ಕಟ್ಟುವ ಸಮಯದಲ್ಲಿ ಒಂದು ಸಮಸ್ಯೆ ಎದುರಾಗುತ್ತದೆ. ಅದೇನೆಂದರೆ ಕಾರಣಾಂತರಗಳಿಂದ ಮಳೆಯ ಕೊರತೆಯಿಂದಾಗಿ ಶರಾವತಿಯ ಒಳಹರಿವು ಕಡಿಮೆಯಾದರೆ ಅದನ್ನು ಸರಿದೂಗಿಸವುದು ಹೇಗೆ ಎಂಬ ಪ್ರಶ್ನೆ ಅಂದಿನ ಕಾಲದ ಇಂಜಿನಿಯರುಗಳಿಗೆ ಕಾಡುತ್ತದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಅಂದಿನ ಇಂಜಿನಿಯರ್ಗಳು ನಿರ್ಮಾಣ ಮಾಡಿದ್ದೇ ಈ ಸಮತೋಲನ ಜಲಾಶಯ ಅಂದರೆ Balancing Reservoir. ಇದು ಬಹುಶಃ ನಮ್ಮ ರಾಜ್ಯ ಹಾಗೂ ದೇಶದಲ್ಲಿ ಅನುಷ್ಠಾನಗೊಂಡ ಮೊಟ್ಟಮೊದಲ ನದಿ ತಿರುವು ಯೋಜನೆ ಆಗಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಪಶ್ಚಿಮ ಘಟ್ಟದಲ್ಲಿ ಹುಟ್ಟುವ ಸಾವೇಹಕ್ಲು ಹಾಗೂ ಚಕ್ರ ನದಿಗಳು ಮೂಲದಲ್ಲಿ  ಸಂಚರಿಸುತ್ತಿದ್ದ ಪಥವೇ ಬೇರೆಯಾಗಿತ್ತು ಆದರೆ ಈ ಯೋಜನೆ ಅನುಷ್ಠಾನಗೊಂಡ ನಂತರ ಅವುಗಳನ್ನು ಮನುಷ್ಯ ಬಲವಂತವಾಗಿ ಅದರ ಮೂಲ ಪಥದಿಂದ ಬೇರ್ಪಡಿಸಿದ್ದಾನೆ. 

ಚಕ್ರಾ ಹಾಗೂ ಅದರ ಉಪನದಿಯಾದ ಸಾವೇಹಕ್ಲಿಗೆ ಅಡ್ಡಲಾಗಿ ಕಟ್ಟಿದ ಆಣೆಕಟ್ಟಿನಿಂದಾಗಿ ಈ ನದಿಗಳು ತನ್ನ ಮೂಲ ಪಥದಲ್ಲಿ ಸಂಚರಿಸದೆ ಸಾಕಷ್ಟು ದಶಕಗಳೇ ಕಳೆದು ಹೋಗಿವೆ. ಈ ವಿಮುಖ ಯೋಜನೆ ಅನುಷ್ಠಾನ ಗೊಳ್ಳುವ ಮುಂಚೆ ಚಕ್ರಾ ನದಿಯು ನೈರುತ್ಯ ದಿಕ್ಕಿನಲ್ಲಿ ಹರಿಯುತ್ತಾ ರಮಣೀಯವಾದ ಕಣಿವೆಯಲ್ಲಿ ಸಣ್ಣ ಸಣ್ಣ ಜಲಪಾತಗಳನ್ನು ಸೃಷ್ಟಿಸುತ್ತಾ ಕೊನೆಯಲ್ಲಿ ಒಂದು ದೊಡ್ಡದಾದ ಅದ್ಭುತ ಜಲಪಾತವನ್ನು ಸೃಷ್ಟಿಸಿ ಮುಂದೆ ಸಾಗಿದಾಗ ಕೆಳಭಾಗದಲ್ಲಿರುವ ಸಾವೇಹಕ್ಲು ಉತ್ತರಾಭಿಮುಖವಾಗಿ ಬಂದು ಚಕ್ರ ನದಿಯನ್ನು ಸೇರಿ ಘಟ್ಟದ ಕೆಳಗೆ ಧುಮುಕಿ ಕರಾವಳಿಯ ಪಂಚಗಂಗೊಳ್ಳಿಯ ಹತ್ತಿರ ವಾರಾಹಿ, ಕುಬ್ಜ, ಸೌಪರ್ಣಿಕಾ ಹಾಗೂ ಕೇದಕ ನದಿಗಳ ಜೊತೆಗೂಡಿ ಅರಬ್ಬೀ ಸಮುದ್ರವನ್ನು ಸೇರುವ ಸೃಷ್ಟಿಕರ್ತನ ನಿಯಮ ಇತ್ತು. ಆದರೆ ಈ ವಿಮುಖ ಯೋಜನೆಯಿಂದಾಗಿ ಈ ಎರಡು ನದಿಗಳು ಶರಾವತಿಯ ಹಿನ್ನೀರನ್ನು ಸೇರಿ ಹೊನ್ನಾವರದ ಹತ್ತಿರ ಅರಬ್ಬೀ ಸಮುದ್ರವನ್ನು ಸೇರುತ್ತವೆ.

ಶಿವಮೊಗ್ಗವು ಜಲಪಾತಗಳು, ಕಾಡುಗಳು ಮತ್ತು ಬೆಟ್ಟಗಳು ಸೇರಿದಂತೆ ಸುಂದರವಾದ ನೈಸರ್ಗಿಕ ತಾಣಗಳಿಂದ ಆವೃತವಾಗಿದೆ, ಇದು ಪ್ರಕೃತಿ ಪ್ರಿಯರಿಗೆ ಮತ್ತು ಚಾರಣಿಗರಿಗೆ ನೆಚ್ಚಿನ ತಾಣವಾಗಿದೆ. ಈ ಪ್ರದೇಶದ ಪ್ರಶಾಂತ ವಾತಾವರಣ ಮತ್ತು ಆಹ್ಲಾದಕರ ವಾತಾವರಣವು ದೇಶದ ವಿವಿಧ ಭಾಗಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಭಾಷೆ ಬದಲಾಯಿಸಿ