ಕೆ ವಿ ಸುಬ್ಬಣ್ಣ
ಕೆ ವಿ ಸುಬ್ಬಣ್ಣನವರ ಎಂದೆ ಪ್ರಸಿದ್ದಿ ಪಡೆದಿರುವ ಕುಂಟಗೋಡು ವಿಭೂತಿ ಸುಬ್ಬಣ್ಣ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಹೆಗ್ಗೋಡುನಲ್ಲಿ ಜನಿಸಿದರು. 1937 ಫೆಬ್ರವರಿ 20 ರಂದು ಜನಿಸಿದ ಇವರು ಮುಂದೆ ಹೆಗ್ಗೋಡಿನಂತಹ ಚಿಕ್ಕ ಊರಿನಲ್ಲಿದ್ದುಕೊಂಡೇ 1949 ರಲ್ಲಿ ನೀಲಕಂಠೇಶ್ವರ ನಾಟ್ಯಸೇವಾ ಸಂಘ (ನೀನಾಸಂ)ರಂಗ ಸಂಸ್ಥೆಯನ್ನು ನಿರ್ಮಿಸಿ, ರಂಗ ಚಟುವಟಿಕೆಗಳ ಮೂಲಕ ಅಂತಾರಾಷ್ಟ್ರೀಯ ಗಮನ ಸೆಳೆದರು. ಅಕ್ಷರ ಪ್ರಕಾಶನವನ್ನು ಕೆ.ವಿ.ಸುಬ್ಬಣ್ಣನವರು ಹೆಗ್ಗೋಡಿನಲ್ಲಿ ಸ್ಥಾಪಿಸಿದರು.
ಈ ಮೂಲಕ ಗ್ರಾಮೀಣ ರಂಗಭೂಮಿಗೆ ತನ್ನದೇ ಆದ ಸ್ಥಾನ, ಪ್ರತಿಷ್ಠೆಗಳನ್ನು ತಂದುಕೊಟ್ಟರು. ನೀನಾಸಂ ಸಂಸ್ಥೆ ನಡೆಸುವ ತಿರುಗಾಟ ಇಂದು ಕನ್ನಡ ರಂಗಭೂಮಿಯ ಒಂದು ಅವಿಭಾಜ್ಯ ಅಂಗವಾಗಿದೆ. ಸಾಹಿತಿಯೂ ಆಗಿದ್ದ ಇವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಸುಬ್ಬಣ್ಣ ನಾಟಕಕಾರರು ಮಾತ್ರವಲ್ಲದೆ ಅನುವಾದಕ, ಉತ್ತಮ ವಿಮರ್ಶಕ ಹಾಗೂ ಪ್ರಕಾಶಕ ಕೂಡಾ ಆಗಿದ್ದರು. ಇವರು ಚಲನಚಿತ್ರಕ್ಕೆ ಸಂಬಂಧಿಸಿದಂತೆ ೨೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ಇವರಿಗೆ ಫಿಲಿಫೀನ್ಸ್ ಸರ್ಕಾರ ಕೊಡುವ ಪ್ರತಿಷ್ಠಿತ ರಾಮನ್ ಮ್ಯಾಗ್ಸೇಸೆ ಪ್ರಶಸ್ತಿ, ಕಾಳಿದಾಸ ಸಮ್ಮಾನ್ ಪ್ರಶಸ್ತಿ, ಮತ್ತು ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು ಎಂಬ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
2005 ಜುಲೈ 16 ರಂದು ಹೃದಯಾಘಾತದಿಂದ ಕೆ.ವಿ.ಸುಬ್ಬಣ್ಣನವರು ನಿಧನರಾದರು.