ಉಡುತಡಿ
ಉಡುತಡಿ (ಉಡುಗಣಿ) ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಒಂದು ಸಣ್ಣ ಹಳ್ಳಿ. ಶಿವಮೊಗ್ಗದಿಂದ
66.8 ಕಿಲೋಮೀಟರ್ ಇದೆ. ಇದು ಶಿಕಾರಿಪುರಕ್ಕೆ ವಾಯುವ್ಯವಾಗಿ ಸುಮಾರು 15 ಕಿಲೋಮೀಟರ್ ಮತ್ತು ಸಿರಾಳಕೊಪ್ಪಕ್ಕೆ ದಕ್ಷಿಣಕ್ಕೆ 5 ಕಿಲೋಮೀಟರ್ ದೂರದಲ್ಲಿದೆ. ಉಡುತಡಿಗೆ ಶಿವಮೊಗ್ಗ ರೈಲ್ವೆ ನಿಲ್ದಾಣ ಹತ್ತಿರದ ರೈಲ್ವೆ ನಿಲ್ದಾಣ.
12 ನೇ ಶತಮಾನದಲ್ಲಿ, ಇದು ರಾಜ ಕೌಶಿಕನ ರಾಜಧಾನಿಯಾಗಿತ್ತು. ಇಲ್ಲಿ ಹಳೆಯ ಕೋಟೆಯಿದೆ. ಉಡುತಡಿಯು ಶಿವನ ಮಹಿಮೆಯನ್ನು ಹಾಡಿದ ಹೊಗಳಿದ 12 ನೇ ಶತಮಾನದ ಪೌರಾಣಿಕ ಕವಿ, ಸಂತ ಅಕ್ಕ ಮಹಾದೇವಿಯ ಜನ್ಮ ಸ್ಥಳವಾಗಿದೆ. ಕನ್ನಡದಲ್ಲಿ ಆಕೆಯ ಪದ್ಯಗಳನ್ನು ವಚನಗಳು ಎಂದು ಕರೆಯಲಾಗುತ್ತದೆ. ಅಕ್ಕ ಮಹಾದೇವಿಯ ನೆನಪಿಗಾಗಿ ದೇವಾಲಯವನ್ನು ನಿರ್ಮಿಸಲಾಗಿದೆ.
ಪಿಡುಪರ್ತಿ ಸೋಮನಾಥ ಇದನ್ನು ಉದತಡಿ ಎಂದು ಕರೆದಿದ್ದಾನೆ. ಉದ ಎಂದರೆ ಉದಕ ಅಥವಾ ನೀರು ಎಂದರ್ಥವಾಗುತ್ತದೆ. ಆದ್ದರಿಂದ ಉದತಡಿ (ಜಲಾಶಯದ ಸನಿಹದ ಊರು) ಉಡುತಡಿ ಎಂದಾಗಿರುವ ಸಂಭವವಿದೆ. ಬಳ್ಳಿಗಾವೆಯ ಬಳಿ (ಮೂರು ಮೈಲಿ) 5 ಕಿಮೀ ಗಳ ಅಂತರದಲ್ಲಿ ಒಂದು ವಿಶಾಲವಾದ ಕೆರೆಯಿದೆ. ಈ ಜಲಾಶಯದಿಂದಾಗಿ ಈ ಪ್ರದೇಶಕ್ಕೆ ಉಡುತಡಿ ಎಂಬ ಹೆಸರು ಬಂದಿರಬೇಕು. ಈ ಕೆರೆಯ ದಂಡೆಯಲ್ಲಿಯೇ ಕಲ್ಲಿನಲ್ಲಿ ಕೆತ್ತಿದ ಕಮಲ ಗಂಗವ್ವನ ವಿಗ್ರಹವಿದೆ. ಈ ಮೂರ್ತಿಯ ಶಿರೋಭಾಗವನ್ನು ಕಮಲಾಕೃತಿಯಲ್ಲಿ ಕೆತ್ತಲಾಗಿದೆ. ಕಂಠದಿಂದ ಕೆಳಗಿನ ಭಾಗ ನಗ್ನವಾಗಿದೆ. ಇದನ್ನೇ ಮಹಾದೇವಿಯ ಮೂರ್ತಿ ಎಂದು ಕರೆಯುತ್ತಾರೆ.