ಪ್ರೇಮಾ ಕಾರಂತ
ಪ್ರೇಮಾ ಕಾರಂತ ಅವರು 15 ಆಗಸ್ಟ್ 1936 ರಂದು ಭದ್ರಾವತಿಯ ಬಡ ಕುಟುಂಬದಲ್ಲಿ ಜನಿಸಿದರು. ಇವರು ತನ್ನ ತಂದೆ ದೇವೋಜಿ ರಾವ್ ಮತ್ತು ತಾಯಿ ಕಮಲಮ್ಮ. ಇವರು ಕನ್ನಡದ ಪ್ರಸಿದ್ಧ ರಂಗಕರ್ಮಿ ಹಾಗೂ ಕನ್ನಡದ ಪ್ರಪ್ರಥಮ ಮಹಿಳಾ ನಿರ್ದೇಶಕಿ. ಇವರು ಕನ್ನಡದ ಬಿ. ವಿ. ಕಾರಂತ್ ಅವರ ಪತ್ನಿ. ಎಂ.ಕೆ.ಇಂದಿರಾ ಅವರ ಕಾದಂಬರಿಯಾಧಾರಿತ “ಫಣಿಯಮ್ಮ” ಮೂಲಕ ಕನ್ನಡ ಚಿತ್ರರಂಗದ ಪ್ರಥಮ ಮಹಿಳಾ ನಿರ್ದೇಶಕಿಯಾದರು.
ಪ್ರೇಮಾ ಕಾರಂತ್ ಅವರು ನಾಟಕಕಾರರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಮುಖ್ಯವಾಗಿ ಮಕ್ಕಳ ಕಡೆಗೆ ಕೇಂದ್ರೀಕರಿಸಿದ ಹೆದ್ದಾಯಣ, ದೈತ್ಯ, ಬಂದ ಬಂದ ಗುಣವಂತ ಮತ್ತು ಜೈಂಟ್ ಮಾಮಾ ಮುಂತಾದ ನಾಟಕಗಳನ್ನು ನಿರ್ದೇಶಿಸಿದರು. ಅವರ ನಾಟಕಗಳು ಮುಖ್ಯವಾಗಿ ಕನ್ನಡ ಅಥವಾ ಕನ್ನಡಕ್ಕೆ ಅನುವಾದಿಸಲಾದ ಇತರ ಭಾರತೀಯ ಭಾಷೆಗಳಲ್ಲಿ ಬರೆದವುಗಳಾಗಿವೆ. ಅವರು ಬೆನಕ ಮಕ್ಕಳ ಕೇಂದ್ರ ಎಂಬ ಮಕ್ಕಳ ರೆಪರ್ಟರಿಯನ್ನು ಪ್ರಾರಂಭಿಸಿದರು. ಅಲಿಲು ರಾಮಾಯಣದಂತಹ ನಾಟಕಗಳನ್ನು ಪ್ರದರ್ಶಿಸುವುದರ ಜೊತೆಗೆ, ಮಕ್ಕಳಿಗೆ ಮೈಮ್ ಕಲೆ, ವೇಷಭೂಷಣ ವಿನ್ಯಾಸ ಮತ್ತು ರಂಗಪರಿಕರಗಳ ಬಳಕೆಯನ್ನು ಕಲಿಸುವಲ್ಲಿ ತೊಡಗಿಸಿಕೊಂಡಿದ್ದಾರೆ.
ಈ ರೆಪರ್ಟರಿಯು 1979 ರಲ್ಲಿ “ಅಲಿಬಾಬಾ” ಶೀರ್ಷಿಕೆಯ ಮೊದಲ ನಾಟಕವನ್ನು ಪ್ರದರ್ಶಿಸಿತು. 10 ನಾಟಕಗಳ ನಿರ್ದೇಶನ, 20 ಮಕ್ಕಳ ನಾಟಕಗಳ ನಿರ್ಮಾಣ ಮತ್ತು 120 ನಾಟಕಗಳ ವಸ್ತ್ರ ವಿನ್ಯಾಸ ನಾಟಕರಂಗಕ್ಕೆ ಇವರ ಕೊಡುಗೆಗಳು. ರಾಷ್ಟ್ರೀಯ ಪುಸ್ತಕ ಟ್ರಸ್ಟ್ ನ ಭಾಷಾಂತರಕಾರರೂ ಆಗಿದ್ದ ಅವರು ಕನ್ನಡದಿಂದ ಹಿಂದಿ ಮತ್ತು ಹಿಂದಿಯಿಂದ ಕನ್ನಡಕ್ಕೆ ಒಟ್ಟು 08 ನಾಟಕಗಳನ್ನು ಅನುವಾದಿಸಿದ್ದಾರೆ.
ಜಿ.ವಿ. ಅಯ್ಯರ್ ಅವರ ಹಂಸಗೀತೆ ಚಿತ್ರಕ್ಕೆ ವಸ್ತ್ರ ವಿನ್ಯಾಸಕಿಯಾಗಿ ಆಯ್ಕೆಯಾದಾಗಿನಿಂದ ಪ್ರೇಮಾ ಅವರ ಸಿನಿಮಾ ಜಗತ್ತಿನೊಂದಿಗೆ ಒಡನಾಟ ಆರಂಭವಾಯಿತು. ಅವರು 1977 ರಲ್ಲಿ ಕುದುರೆ ಮೊಟ್ಟೆ ಚಿತ್ರಕ್ಕೆ ಕಲಾ ನಿರ್ದೇಶಕರಾಗಿ ಆಯ್ಕೆಯಾದರು. ಆರಂಭದಲ್ಲಿ ಕಲಾ ನಿರ್ದೇಶನದೊಂದಿಗೆ ಮಾತ್ರ ಸಂಬಂಧ ಹೊಂದಿದ್ದ ಪ್ರೇಮಾ ಅವರು ಚಲನಚಿತ್ರ ನಿರ್ಮಾಣದಲ್ಲಿ ತಮ್ಮ ಕೈಯನ್ನು ಪ್ರಯತ್ನಿಸಿದರು. ಅವರ ಮೊದಲ ನಿರ್ದೇಶನದ ಸಾಹಸವು ಫಣಿಯಮ್ಮ ಕನ್ನಡ ಕಾದಂಬರಿಯನ್ನು ಆಧರಿಸಿತ್ತು ಮತ್ತು ಈ ಚಿತ್ರವು ಅವರ ವಿಮರ್ಶಾತ್ಮಕ ಮೆಚ್ಚುಗೆಯನ್ನು ಗಳಿಸಿತು. ಚಿಕ್ಕ ವಯಸ್ಸಿನಲ್ಲೇ ವಿಧವೆಯಾದ ಹುಡುಗಿಯೊಬ್ಬಳು ಪುರುಷ ಪ್ರಧಾನ ಸಮಾಜದಲ್ಲಿ ಅಂಟಿಕೊಂಡಿರುವ ಕಳಂಕವನ್ನು ಜಯಿಸಲು ಅವಳು ಪಡುವ ಹೋರಾಟ ಮತ್ತು ಧೈರ್ಯದ ಕಥೆಯನ್ನು ಈ ಚಿತ್ರ ಹೊಂದಿದೆ.
ಇವರು 29 ಅಕ್ಟೋಬರ್ 2007 ರಂದು ನಿಧನರಾದರು. ಇವರು ಕನ್ನಡ ಸಿನಿಮಾ ರಂಗಕ್ಕೆ ನೀಡಿದ ಕೊಡುಗೆ ಅತ್ಯುತ್ತಮವಾಗಿದೆ.